ಉರುಟಣೆ
ಕನ್ನಡಿಗರ ಮದುವೆ ಸಮಾರಂಭದಲ್ಲಿ ಹಸೆಯ ಮೇಲೆ ಕುಳಿತ ವಧೂವರರು ಪರಸ್ಪರ ಅರಿಸಿನ, ಕುಂಕುಮ. ಗಂಧ, ಪುಷ್ಪಗಳನ್ನು ಅನುಲೇಪನ ಮಾಡುವ, ತಾಂಬೂಲ ನೀಡುವ ಪದ್ಧತಿ, ಆಗ ಹೇಳುವ ಹಾಡುಗಳನ್ನು ಉರುಟಣೆಯ ಹಾಡುಗಳು ಎನ್ನುತ್ತಾರೆ. ಉರುಟಣೆ ಎಂಬ ಪದಕ್ಕೆ ಸುತ್ತುವುದು, ಲಾಗಹಾಕುವುದು ಎಂಬ ಅರ್ಥವಿದೆ. ಇಲ್ಲೂ ಉಪಚಾರ ಹೆಂಡತಿಯಿಂದ ಗಂಡನಿಗೆ ಆಗುವಂತೆ ಗಂಡನಿಂದ ಹೆಂಡತಿಗೂ ಆಗುತ್ತದಾಗಿ ಇದನ್ನು ಉರುಟಣೆ ಎಂದು ಕರೆದಿರಬೇಕು. ನೂತನ, ಅಪರಿಚಿತ ವಧೂವರರಲ್ಲಿ ಪರಸ್ಪರ ಸಂಕೋಚಪ್ರವೃತ್ತಿಯನ್ನು ಕಳೆಯುವುದು ಇದರ ಉದ್ದೇಶವೆಂದು ತೋರುತ್ತದೆ.

ಸಾಮಾನ್ಯವಾಗಿ ಮದುವೆಯ ಸಂಜೆ ವಿಶಾಲವಾದ ಅಂಗಳದಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ಮದುವೆಗೆ ಬಂದಿರುವ ಬೀಗರೂ ಊರಿನ ಜನರೂ ಆ ಸಭೆಯಲ್ಲಿ ಕುಳಿತುಕೊಳ್ಳುತ್ತಾರೆ. ಅವರಿಗೆಲ್ಲ ಅದೊಂದು ಮನೋರಂಜನೆಯ ಕಾರ್ಯಕ್ರಮವಾಗಿರುತ್ತದೆ. ಆದರೆ ನಾಚಿಕೆಯುಳ್ಳ ವಧುವಿಗೆ ಅದೊಂದು ಪರೀಕ್ಷೆಯೇ ಸರಿ, ವಧೂವರರನ್ನು ಮಂಟಪದಲ್ಲಿ ಅಲಂಕೃತವಾದ ಆಸನದ ಮೇಲೆ ಕೂಡಿಸಿರುತ್ತಾರೆ. ಅನಂತರ ವಧು ತನ್ನ ಪತಿಯನ್ನು ದೈವಿಕ ಭಾವನೆಯಿಂದ ಪೂಜಿಸಬೇಕು. ನಾವು ದೇವರನ್ನು ಅಷ್ಟವಿಧ ಪೂಜೆಯಿಂದ ಸಂಪ್ರೀತಗೊಳಿಸುವಂತೆ, ಮೊದಲು ವಧು ತನ್ನ ಪತಿಯನ್ನು ಈ ಸುಂದರವಾದ ಪೀಠಕ್ಕೆ ಆಗಮಿಸಬೇಕೆಂದು ಹಾಡಿನ ಮೂಲಕ ಪ್ರಾರ್ಥಿಸುತ್ತಾಳೆ. 

ಉರುಟಣೆಗೆ ಕರೆಯುವುದು, ಕುಂಕುಮ ಹಚ್ಚುವುದು ಅರಿಸಿನ ಹಚ್ಚುವುದು, ಚೆಂಡಾಡುವುದು, ಹಾರಹಾಕುವುದು, ತಾಂಬೂಲ ಕೊಡುವುದು ಈ ಎಲ್ಲ ಕಾರ್ಯಕ್ರಮಗಳಿಗೂ ಬೇರೆ ಬೇರೆ ಹಾಡುಗಳಿರುತ್ತವೆ. ವಧು ಮೊದಲು ಹಾಡುವ ಹಾಡಿಗೆ ಹಸೆಗೆ ಕರೆಯುವ ಹಾಡು ಎಂತಲೇ ಹೆಸರು. ಸಭಾಕಂಪನವಿರುವ ವಧುವಿನ ಜೊತೆಗೆ ಆಕೆಯ ತಂಗಿಯೊ ಅಥವಾ ಬೇರೆ ಯಾರಾದರೂ ಹೆಣ್ಣುಮಕ್ಕಳೂ ದನಿಗೂಡಿಸುತ್ತಾರೆ.
ಜಯ ಜಾನಕಿ ಪತಿ ರಾಘವ ಮೂರುತಿ 
 ದಯಮಾಡುರುಟಣೆಗೆ |
 ನಿಗಮಾನುತ ಹೃದಯಾನ್ವಿತ
 ಸೇವಿತ ಸೇವಕಿ ನಾ ನಿಮಗೆ ||
ಎಂದು ಉರುಟಣೆಗೆ ದಯಮಾಡಿಸಬೇಕೆಂದು ವಧು ಪ್ರಾರ್ಥಿಸುತ್ತಾಳೆ. ಅಷ್ಟು ಹೊತ್ತಿಗೆ ಒಬ್ಬ ಹಿರಿಯ ಮುತ್ತೈದೆ ವಧೂವರರ ಹತ್ತಿರ ಬಂದು ಪತಿಪೂಜೆ ಅರ್ಥಾತ್ ಉರುಟಣೆ ಮಾಡಿಸಲು ಸಹಾಯ ಮಾಡುತ್ತಾಳೆ. ಅರಿಸಿನ ಕುಂಕುಮದ ಬಟ್ಟಲನ್ನು ವಧುವಿನ ಎದುರಿಗೆ ಹಿಡಿದಾಗ ವಧು ಅದನ್ನು ತೆಗೆದುಕೊಂಡು 
ಹಳದಿಯ ಹಚ್ಚುವೆ ಹರಿಕರ ಪಾದಕೆ
 ನಳಿನಾಕ್ಷನ ಫಣೆಗೆ 
| ಹೊಳೆವ ಕಸ್ತೂರಿ ತಿಲಕವ ತಿದ್ದುವೆ 
 ಎಳೆಸಿರಿ ನಗು ಮುಖಕೆ || 
ಎನ್ನುತ್ತ ಅವನ ಕೆನ್ನೆಗೆ ಅರಿಸಿನವನ್ನು ಹಚ್ಚುತ್ತಾಳೆ. ಹಣೆಗೆ ಕುಂಕುಮವಿಡುತ್ತಾಳೆ. ಅನಂತರ ಗಂಧ ಹಚ್ಚುವುದು; ಪನ್ನೀರುದಾನಿ ಕೈಗೆ ಬಂದ ಕೂಡಲೇ(
ಗಂಧವನು ಹಚ್ಚುವೆನು ಇಂದಿರೇಶ ನಿಮಗೆ |
 ವಾಸನೆಯಿಂದಿರುವ ಕೇಸರಿ ಗಂಧವನು | 
ಶ್ರೀಪತಿ ಈ ನಿಮ್ಮ ಮುತ್ತಿನ ಕಂದರಕೀಗ ||
ಎಂದು ಹೇಳುತ್ತ ಪರಿಮಳದ ಪನ್ನೀರನ್ನು ಚಿಮುಕಿಸುತ್ತಾಳೆ. ಈಗ ವೀಳ್ಯ ಕೊಡುವುದು. ಒಂದು ತಟ್ಟೆಯಲ್ಲಿ ಬಣ್ಣದಡಿಕೆ, ಚಿಗುರೆಲೆ, ಏಲಕ್ಕಿ, ಲವಂಗ, ಒಣ ಕೊಬ್ಬರಿ ಮೊದಲಾದುವನ್ನು ಇಟ್ಟಿರಲಾಗುತ್ತದೆ. ವಧು ಆ ತಟ್ಟೆಯನ್ನು ಹಿಡಿದುಕೊಂಡು(
ಮಲೆನಾಡ ಚೂರಡಿಕೆ ಬಣ್ಣಕರ್ಪೂರವನು 
ದೊಡ್ಡ ಸಕ್ಕರೆಯನ್ನು ಸೇರಿಸಿರುವ
 ಎಳೆವೀಳೆದೆಲೆ ಮತ್ತೆ ಸುಗಂಧ ಸುಣ್ಣವನು 
ನಿಮಗಾಗಿ ಹಿಡಿದಿರುವೆ ಸ್ವೀಕರಿಸಿ ದೇವ |
ಎಂದ ಕೂಡಲೇ ಸಭೆಯಲ್ಲಿರುವ ವರನ ಗೆಳೆಯರು ಒಗಟೊಂದನ್ನು ಹೇಳಿ ತಾಂಬೂಲ ಕೊಡುವಂತೆ ವಧುವನ್ನು ಪೀಡಿಸುತ್ತಾರೆ. ಆಗ ವಧು ದ್ರಾಕ್ಷಿ ಬೆಳೆಯುವ ದೇಶ ಕಾಬೂಲ... ರಾಯರಿಗೆ ಕೊಡುವೆನು ತಾಂಬೂಲ ಎಂದ ಕೂಡಲೇ ವರ ನಗುನಗುತ್ತ ತಾಂಬೂಲದ ತಟ್ಟೆ ಮುಟ್ಟುತ್ತಾನೆ. ಆ ಸಭೆಯಲ್ಲಿ ನಗುವಿನ ಹೊನಲೇ ಹರಿಯುತ್ತದೆ. ಇದಾದ ಅನಂತರ ವಧುವರರು ಚೆಂಡಾಡುವುದು. ಮಲ್ಲಿಗೆ ಅಥವಾ ಸೇವಂತಿಗೆ ಹೂವಿನ ಚೆಂಡನ್ನು ಪತಿಯ ಕಡೆಗೆ ವಧು ಎಸೆಯುತ್ತಾಳೆ. ಪತಿ ಅದನ್ನು ಹಿಂತಿರುಗಿಸುತ್ತಾನೆ. ಅದು ಮೈನೋವಿಲ್ಲದ ಒಂದು ಚೆಂಡಾಟ. ಆ ಚೆಂಡು ಒಮ್ಮೆ ವರನ ಕೈಗೂ ಮತ್ತೊಮ್ಮೆ ವಧುವಿನ ಕೈಗೂ ಬರುತ್ತಿರುತ್ತದೆ. ಸಾಮಾನ್ಯವಾಗಿ ವಧುವಿನ ಹಾಡು ಮುಗಿಯುವವರೆಗೂ ಈ ಚೆಂಡಾಟ ನಡೆಯುತ್ತಲೇ ಇರುತ್ತದೆ.
ಚಂಡಾಂಶವಂಶಜಾತಾ| ಚಂಡನಾಡಿದ| 
ಮರುಗ ಮಲ್ಲಿಗೆ ಜಾಜಿ ಸಂಪಿಗೆ
 ದಂಡೆಯಿಂದ ರಚಿತವಾದ| 
ಚಂಡನು ಕೈಕೊಂಡ ನಿಮಿಷದಿ
 ತಂಡದಿ ಶುಭಮಳೆಯು ಕರೆಯೆ||
ಹೀಗೆ ವಧು ಒಂದು ನುಡಿ ಹೇಳಿದ ಅನಂತರ ಹಾಡುವುದು ಗಂಡನ ಸರತಿ, ಆದರೆ ಆತ ಹಾಡುವುದಿಲ್ಲ. ಆತ ಹೇಳಬೇಕಾದ ನುಡಿಯನ್ನೂ ವಧುವೇ ಮುಂದುವರಿಸುತ್ತಾಳೆ. ವರ ಕೇವಲ ಯಾಂತ್ರಿಕವಾಗಿ ಚೆಂಡನ್ನು ಎಸೆಯುತ್ತಾನೆ. ಅಷ್ಟೇ.
ಸುದತಿ ನೋಡು ನಿನ್ನ ಹೃದಯಕೆ
 ಗುರಿ ಇಟ್ಟಿರುವೆನು ನಾನು |
ಇಗೋ ಹಾಕುವೆ, ಅಗೊ ತಗುಲಿತು
 ಸದಯಳೆ ನೀಂ ಸೋತೆ ಎನುತ ||ಚಂ||
ಈ ನುಡಿ ಆಗುತ್ತಿದ್ದಂತೆ ವರ ನಾನೇ ಗೆದ್ದೆ ನೀನೇ ಸೋತೆ ಎನ್ನುತ್ತಾನೆ. ವಧು ಅವನ ವಾದವನ್ನು ಅನಿವಾರ್ಯವಾಗಿ ಒಪ್ಪಿಕೊಂಡಂತೆ ನಟಿಸುತ್ತಾಳೆ. ಹಿರಿಯ ಮುತ್ತೈದೆಯ ಆದೇಶದಂತೆ ವರ ಆ ಹೂವಿನ ದಂಡೆಯನ್ನು ವಧುವಿನ ತಲೆಗೆ ಮುಡಿಸುತ್ತಾನೆ. ಸಭಿಕರೆಲ್ಲ ಚಪ್ಪಾಳೆಯೊಂದಿಗೆ ಹರ್ಷದ್ವನಿಗೈಯ್ಯುತ್ತಾರೆ.
ಹಾರಹಾಕುವುದು, ಆರತಿ ಎತ್ತುವುದು, ಪತಿಯನ್ನು ಪ್ರಾರ್ಥಿಸಿ ಅಲ್ಪಳೂ ಪಾಮರಳೂ ಅಬಲೆಯೂ ಆದ ತನ್ನನ್ನು ಉದ್ಧರಿಸಬೇಕೆಂದು ಕೇಳಿಕೊಳ್ಳುವುದು(ಇವೆಲ್ಲವೂ ಹಾಡಿನ ಮೂಲಕವೇ ನಡೆಯಬೇಕು.
ಹಾರವ ಹಾಕುವೆ ನಾಂ |
ಮಾರಸುಂದರ ನಿಮಗೆ || 
ಜಾಜಿ ಸೇವಂತಿಗೆ, ಮೈಸೂರು ಮಲ್ಲಿಗೆ
ಪರಿಪರಿ ಪರಿಮಳ ಪುಷ್ಪಗಳಾ |
ದುಂಡುಮಲ್ಲಿಗೆ ಸರ, ಕೆಂಡ ಸಂಪಿಗೆಹಾರ
ಕಂಠಕೆ ತೊಡಿಸುವೆ ಶ್ರೀಪತಿ ನಿಮಗೆ ||
ಹಾರ ಹಾಕಿ ಆದ ಅನಂತರ ಆರತಿಯ ಕಾರ್ಯಕ್ರಮ.
ನಳಿನಾಕ್ಷಗೀಗ ಬೆಳಗೂವೆ ನಾ | ಆರೂತಿಯನು ||
ಕಾಳಿಂಗಮರ್ದನ ಕೃಷ್ಣಗೆ ಈಗ || 
ಗೋಕುಲದಲಿ ಹುಟ್ಟಿ ಗೋವುಗಳನೆ ಕಾಯ್ದು | 
ಗೋಪಿಯರೊಡೆಯ ಮುರಳೀಲೋಲನೆ ||
ಎಂದು ಹಾಡಿ ವಧು ಆರತಿ ಬೆಳಗುತ್ತಾಳೆ. ಆಮೇಲೆ ವಿನಯಪೂರ್ವಕವಾದ ಪ್ರಾರ್ಥನೆ. ವಧುವಿನ ಪ್ರಾರ್ಥನೆಯಲ್ಲಿ ಅವಳ ಸೇವಾಭಾವ; ಆತ್ಮನಿವೇದನೆ; ತನ್ನ ಅಲ್ಪ ಅಸ್ತಿತ್ವಗಳು ಒಂದನ್ನೊಂದು ಅಂಟಿರುವ ಸರಪಳಿಯ ಕೊಂಡಿಗಳಂತೆ ಕಂಡುಬರುತ್ತವೆ. ಆಗ ಸಭಿಕರೇ ಏಕೆ, ವರನೂ ಮರುಗಿ ಅವಳಿಗೆ ಭರವಸೆ ನೀಡುವ ಭಾವ ಬೀರುತ್ತಾನೆ.

	ತನ್ನ ಮನದಳಲನ್ನು ನಿವೇದಿಸಿ ಪತಿಯ ಪಾದಕಮಲಗಳಿಗೆ ವಧು ಎರಗುತ್ತಾಳೆ. ಮುತ್ತೈದೆಯರು ಆರತಿಹಾಡು ಹೇಳುತ್ತ ವಧೂವರರಿಗೆ ಅರತಿ ಬೆಳಗುತ್ತಾರೆ. ಅದರೊಡನೆ ಆಶೀರ್ವಾದದ ಹಾಡುಗಳೂ ಸೇರಿರುತ್ತವೆ. ಮುತ್ತೈದೆಯರಿಗೆಲ್ಲ ಅರಿಸಿನಕುಂಕುಮ, ಹೂ ಮತ್ತು ಸೇರಿರುವ ಸಭಿಕರಿಗೆಲ್ಲ ಅವಲಕ್ಕಿ ಉಂಡೆ, ಸಕ್ಕರೆ ಕೊಬ್ಬರಿ ಇಲ್ಲವೇ ಬಾಳೇಹಣ್ಣುಗಳನ್ನು ಹಂಚುತ್ತಾರೆ.

	ಆಮೇಲೆ ವಧೂವರರು ತಮ್ಮ ಜಾಗದಿಂದ ಎದ್ದು ದೇವರ ಮನೆಗೆ ಹೋಗಬೇಕು. ದೇವರಿಗೆ ವಂದಿಸಿ ಮನೆಯಲ್ಲಿ ಹಿರಿಯರಿಗೆಲ್ಲ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು. ಆಗ ಒಂದು ಮೋಜು ನಡೆಯುತ್ತದೆ. ಎಲ್ಲ ಹುಡುಗಿಯರೂ ಅಡಿಗೆ ಮನೆ ಬಾಗಿಲಿಗೆ ಅಡ್ಡಲಾಗಿ ನಿಂತು ವಧುವಿನಿಂದ ವರನ ಹೆಸರನ್ನೂ ವರನಿಂದ ವಧುವಿನ ಹೆಸರನ್ನೂ ಮತ್ತೆ ಮತ್ತೆ ಹೇಳಿಸಿ ನಲಿಯುತ್ತಾರೆ. ಒಗಟು ಹಾಕಿ ಹೆಸರು ಹೇಳಬೇಕೆಂಬುದೊಂದು ನಿಯಮ. ಇಬ್ಬರೂ ಮೂರು ಮೂರು ಬಾರಿ ಪರಸ್ಪರರ ಹೆಸರು ಹೇಳಲೇಬೇಕಾಗುತ್ತದೆ. ಅನಂತರ ದೇವರ ಮನೆಗೆ ಪ್ರವೇಶ, ಇದಕ್ಕೆ ಬಾಗಿಲು ಕಟ್ಟುವುದು ಎಂದೇ ಹೆಸರು. ಇಲ್ಲಿಗೆ ಉರುಟಣೆ ಕಾರ್ಯಕ್ರಮ ಮುಗಿದಂತಾಗುತ್ತದೆ.

	ಉತ್ತರ ಕರ್ನಾಟಕದಲ್ಲಿ ಇನ್ನೊಂದು ಪದ್ಧತಿ ನಡೆದುಬಂದಿದೆ. ಉರುಟಣೆಗೆ ಕುಳಿತುಕೊಳ್ಳುವ ಮುನ್ನ ವರನಾದವ ಅನೇಕ ಗುಂಡಿಗಳಿರುವ ಅಂಗಿಯೊಂದನ್ನು ಹಾಕಿಕೊಂಡಿರುತ್ತಾನೆ; ಅಥವಾ ಒಂದರ ಮೇಲೊಂದರಂತೆ ಎರಡು ಮೂರು ಅಂಗಿಗಳನ್ನು ಹಾಕಿಕೊಂಡಿರಬಹುದು. ಅವನಿಗೆ ಸಾವಿರ ಗುಂಡಿ ಸವಕಾರ (ಸಾಹುಕಾರ) ಇಲ್ಲವೇ ಸಾವಿರ ಗುಂಡಿ ಸರದಾರ ಎನ್ನುತ್ತಾರೆ - ಅವನ ಗೆಳೆಯರು, ವಿನೋದಕ್ಕಾಗಿ, ವಧು ಉರುಟಣೆ ಕಾರ್ಯಕ್ರಮದಲ್ಲಿ ಆರತಿ ಬೆಳಗಿದ ಅನಂತರ ಒಂದೊಂದು ಒಗಟಿನೊಡನೆ ತನ್ನ ಗಂಡನ ಹೆಸರು ಹೇಳಿ ಒಂದೊಂದು ಗುಂಡಿ ಬಿಚ್ಚಬೇಕು. ತೊಟ್ಟ ಬಾಣವನ್ನು ತೊಡಬಾರದೆಂಬ ನಿಯಮದಂತೆ ಒಮ್ಮೆ ಹೇಳಿದ ಒಗಟನ್ನು ಪುನಃ ಹೇಳುವಂತಿಲ್ಲ. ಆದ್ದರಿಂದ ವಧು ತನ್ನ ಮದುವೆಗೆ ಬಹಳ ಮುಂಚೆಯೇ ನೂರಾರು ಒಗಟುಗಳನ್ನು ಅಭ್ಯಾಸ ಮಾಡಿರುತ್ತಾಳೆ. ಹಾಡುಗಳನ್ನಾದರೂ ಅಷ್ಟೇ. ಪರೀಕ್ಷೆಗೆ ಕುಳಿತುಕೊಳ್ಳುವ ವಿದ್ಯಾರ್ಥಿನಿಯಂತೆ ಈ ಸಾರ್ವಜನಿಕ ಸಭೆಯಲ್ಲಿ ನಡೆಯುವ ತನ್ನ ಪರೀಕ್ಷೆಗೆ ಆಕೆ ಸಿದ್ಧತೆ ಮಾಡಿಕೊಂಡಿರಲೇಬೇಕು. ಕೆಲವು ಒಗಟುಗಳು ಹೀಗಿವೆ.

1 ಹಂಪೆಯಲ್ಲಿ ಆಗುವುದು ವಿರೂಪಾಕ್ಷನ ತೇರು. ಅಲ್ಲಿ ಹರಿವುದು ತುಂಗಭದ್ರಾ ನೀರು.. . . . . ರಾಯರಿಗೆ ಹಾಕುವೆನು ಗುಲಾಬಿ ಪನ್ನೀರು.
2 ಗಂಗಾಯಮುನಾ ಸರಸ್ವತಿ ಸಂಗಮ. . . . . ರಾಯರಿಗೆ ಹಚ್ಚುವೆ ಕುಂಕುಮ.
3 ಜೀಮೂತವಾಹನನನ್ನು ಹಿಂಸಿಸಿದುದು ಗರುಡಪಕ್ಷಿ. . . . . ರಾಯರ ಹೆಸರು ಹೇಳುವೆನು ನಿಮ್ಮೆಲ್ಲರ ಸಾಕ್ಷಿ.
4 ಮನುಷ್ಯನು ಮುಪ್ಪಿನ ಕಾಲದಲ್ಲಿ ಬಯಸುವುದು ವೈರಾಗ್ಯ . . . ರಾಯರೇ ನನಗೆ ಸೌಭಾಗ್ಯ.
5 ಹೆಂಗಳೆಯರ ಕೊರಳಲ್ಲಿ ಹೊಳೆಯುವುದು ಕಂಠೀಹಾರ . . . . ರಾಯರಿಗೆ ಹಾಕುವೆನು ಮಲ್ಲಿಗೆಹಾರ.
6 ಕಲ್ಲುಸಕ್ರ ಹಳಕು, ಬೆಳದಿಂಗಳ ಬೆಳಕು, ಈ ನನ್ನ ಚಂದ್ರಮುಖಿಯ ಮುಖವೆಲ್ಲ ಹುಳುಕು. (ವರ ಹೇಳುವುದು).

ಹಿರಿಯರು ಜಲ, ಗಂಧ (ಅಕ್ಷತೆ), ಪತ್ರ, ಧೂಪ, ದೀಪ, ನೈವೇದ್ಯ, ತಾಂಬೂಲ ಮೊದಲಾದ ಅಷ್ಟವಿಧ ಪೂಜೆಗಳಿಂದ ಭಗವಂತನನ್ನು ಪೂಜಿಸಿದರೆ ಇಷ್ಟಾರ್ಥಗಳು ಸಿದ್ಧಿಸುತ್ತವೆಂದು ನಿಯಮ ಮಾಡಿದ್ದಾರೆ. ಅದರಿಂದ ಪರಮಾತ್ಮ ಸುಪ್ರೀತನಾಗುತ್ತಾನೆ. ಭಕ್ತ ಭಗವಂತನನ್ನು ಕುರಿತು ಮಾಡುವ ಅಷ್ಟವಿಧಪೂಜೆ ಈ ಉರುಟಣೆಯಲ್ಲಿ ಸಮಾವೇಶಗೊಂಡಿದೆ. ಹೆಂಡತಿಗೆ ಗಂಡನೇ ದೇವರೆಂಬ ಭಾವ ಮೂಡಿಬರಲು ಈ ಮನೋರಂಜನ ಪ್ರಧಾನವಾದ ಕಾರ್ಯಕ್ರಮವನ್ನು ರೂಪಿಸಿದ್ದಾರೆ. ಭಾರತೀಯ ಸಂಸ್ಕøತಿ ಮತ್ತು ಆಧ್ಯಾತ್ಮಿಕತೆಯ ತಿರುಳೇ ಇದರಲ್ಲಿದೆ.									
(ಸಿ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ